About Me

Monday, June 21, 2010

ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ…ತಾಯ್ತನಕ್ಕೆ ಯಾವುದೇ ಭಾಷೆ, ಪ್ರದೇಶ, ಸಂಸ್ಕ್ರುತಿ, ಪರಿಸರ, ಜಾತಿ ಇಲ್ಲಾ. ಒಟ್ಟು ಜೀವ ಜಗತ್ತಿಗೆ ಮೀರಿದ ಒಂದು ಅಪರಿಮಿತ ಅನುಭವ. ತಾಯ್ತನ, ಹೆಣ್ಣು ಜೀವ ಸಂಕುಲಕ್ಕೆ ಪ್ರಕೃತಿಯ ವರದಾನ. ತಾಯ್ತನದ ಭಾಷೆ ಜಗತ್ತಿನ ಎಲ್ಲಾ ಗೆರೆಗಳನ್ನು ಮೀರಿ ಏಕತಾನವಾಗುತ್ತದೆ.

ಜಗತ್ತಿನ ಎಲ್ಲಾ ಜೀವಸಂಕುಲದ ತಾಯಂದಿರಿಗೆ ನನ್ನ ನಮನ.

ನನ್ನ ಪಯಣದಲ್ಲಿ ನಾನು ಎದುರಾದ ತಂದೆ ತಾಯಿಯ ಕಂದನೆಡೆಗಿನ ಪ್ರೀತಿ ಇಲ್ಲಿದೆ. ತನ್ನ ಮಗುವಿಗೆ ಹಾಲುಣಿಸುತ್ತಾ ದ್ಯಾನಸ್ತಸ್ಥಿತಿಯಲ್ಲಿ ಕುಳಿತ ತಾಯನ್ನು ಕಂಡೆ. ಮಗು ಹಾಲು ಹೀರುತ್ತಾ ಹಾಗೇ ನಿದ್ದೆಗೆ ಜಾರುತ್ತಿದೆ. ತಾಯಿ ತನ್ನ ಕಂದನ ತಲೆಯನ್ನು ಹಾಗೇ ಮೆಲ್ಲಗೆ ಹಿಡಿದಿದ್ದಾಳೆ. ಮಗು ಸಂಪೂರ್ಣ ನಿದ್ದೆಗೆ ಜಾರಿ ಮೊಲೆ ತೊಟ್ಟನ್ನು ಬಿಟ್ಟ ತಕ್ಷಣ ತಾಯಿಯ ಕೈಯಲ್ಲಿ ಮಗುವಿನ ತಲೆ! ಮಗುವಿಗೆ ಪೆಟ್ಟಾಗದಂತೆ ರಕ್ಷಣೆ ನೀಡಿದ ತಾಯಿ ಅದೇ ಸ್ಥಿತಿಯಲ್ಲಿ ನಿದ್ದೆಗೆ ಜಾರಿತು. ತನ್ನ ಅರೆ ನಿದ್ರಾವಸ್ಥೆಯಲ್ಲಿಯೂ ಮಗುವಿನೆಡೆಗಿನ ತನ್ನ ಕಾಳಜಿ ಕಳೆದುಕೊಳ್ಳದ ತಾಯಿಗೆ ನನ್ನ ನಮನ. ನಿಜಕ್ಕೂ ತಾಯಂದಿರು ಪೂಜ್ಯರಾಗುವುದು ಇಲ್ಲಿಯೇ.

ಮೊಲೆ ತೊಟ್ಟು ಹೀರುತ್ತಿದ್ದ ಎಳೆ ಕಂದಮ್ಮ ತನ್ನ ನಾಲಗೆಯನ್ನು ಹೊರಗೇ ಬಿಟ್ಟು ನಿದ್ರೆ ಮಾಡುತಿತ್ತು. ನಾನು ಫೊಟೋ ಕ್ಲಿಕ್ಕಿಸುತ್ತಿದ್ದದ್ದನ್ನು ಗಮನಿಸಿದ ತಂದೆ ಅಲ್ಲಿಗೆ ಬಂದು ತನ್ನ ಸಂಸಾರ ಸೇರಿದನು. ನನ್ನನ್ನ ತುಂಬಾ ಹೊತ್ತು ಗಮನಿಸಿದಾತ ನಂತರ ತನ್ನ ಮಗುವಿನ ನಾಲಗೆಯನ್ನು ತನ್ನ ಕೈ ಬೆರಳಿಂದ ಒಳಗೆ ತುರುಕುವ ಪ್ರಯತ್ನ ಮಾಡಿದ. ಅಷ್ಟರಲ್ಲಿ ಎಚ್ಚರಾದ ಮಗು ತನ್ನ ತಾಯಿಯನ್ನು ತಬ್ಬಿ ಹಿಡಿಯಿತು. ಮಗುವಿನ ಜೊತೆಗೆ ಎಚ್ಚರಾದ ತಾಯಿಯು ಮಗುವನ್ನು ತಬ್ಬಿದಳು. ನಂತರ ತನ್ನ ಪತಿರಾಯ ತನ್ನಾಕೆಯನ್ನು ತಬ್ಬಿ ಮಗುವನ್ನು ತಮ್ಮಿಬ್ಬರ ಮದ್ಯೆ ಬೆಚ್ಚಗಿನ ಶಾಖನೀಡುತ್ತಾ ಮಲಗಿಸಿಕೊಂಡು ನಾವಿಬ್ಬರೂ ಈ ಜಗತ್ತಿನ ಅದ್ವಿತೀಯ ಜೋಡಿಗಳು ಎಂದು ಸಾರುತ್ತಿದ್ದಂತಿತ್ತು. ಈ ಕುಟುಂಬ ನಿಜಕ್ಕೂ ಹೊಟ್ಟೆಕಿಚ್ಚು ತರಿಸುವಂತಿತ್ತು.

"ಪ್ರೀತಿಯೇ ಆ ದ್ಯಾವ್ರುತಂದ ಆಸ್ತಿ ನಮ್ಮ ಪಾಲಿಗೆ…" ಎಂದು ತಂಗಾಳಿ ಹಿಮ್ಮೇಳದಲ್ಲಿ ಹಾಡಿದಂದಂತಿತ್ತು.

ತನ್ನ ಒಡಲಲ್ಲಿ ಒಂಭತ್ತು ತಿಂಗಳು ಹೊತ್ತು, ಹೆತ್ತು ತನ್ನ ಕಂದಮ್ಮನಿಗೆ ಹಾಲುಣಿಸದೇ ಬಾಟ್ಲಿ ಹಾಲು ನೀಡುವ ಆಧುನಿಕ ತಾಯಂದಿರಿಗೆ ಇದು ಪಾಠವಾಗಲಿ. ಜನನಕ್ಕೆ ಕಾರಣಾಗುವುದಷ್ಟೇ ನನ್ನ ಕರ್ತವ್ಯ ಮುಂದಿನದ್ದೆಲ್ಲಾ ನನಗೇಕೆ ಅವಳಿದ್ದಾಳಲ್ಲಾ ಎಂದು ಅಸಡ್ಡೆ ತೋರುವ ಆಧುನಿಕ ತಂದೆಯರಿಗೆ ಈ ಕುಟುಂಬ ಸ್ಪೂರ್ತಿಯಾಗಲಿ.

ಪ್ರಕೃತಿಯಿಂದ ಕಲಿಯುವುದು ಸಾಕಷ್ಟಿದೆ!

ಗೌರೀಶ ಕಪನಿ