About Me

Friday, July 1, 2011

"ಬದುಕು" ಎನ್ನುವ ಮೇಷ್ಟ್ರು


ಕಳೆದ ಆರು ತಿಂಗಳಲ್ಲಿ ಎಷ್ಟೆಲ್ಲಾ ಒತ್ತಡಗಳು, ಏರಿಳಿತಗಳ ನಡುವೆ ಈಗ ಕೊಂಚ ಬಿಡುವಾಗಿದೆ. ಕೆಲಸದ ಗೊಂದಲ, ಹೊಸ ಕೆಲಸ, ಕಂಪನಿ, ಹೊಸ ಜಾಗ, ಜನ! ವರ್ಷಗಳಿಂದ ಹದಗೆಟ್ಟ ಬದುಕು ಈಗ ನಿಧಾನಗತಿಯಲ್ಲಿ ಸ್ಥಿಮಿತಕ್ಕೆ ಬರುತ್ತಿದೆ. ಇಂಥದ್ದೊಂದು ಬದಲಾವಣೆಗೆ ಮನಸ್ಸು ಹಾತೊರೆಯುತ್ತಿತ್ತು. ಗೆದ್ದಲು ಹಿಡಿದಿದ್ದ ಬದುಕು ಹೊಸ ಮಳೆಯನ್ನು ಕಂಡಿದೆ. ಆ ಮಳೆಯಲ್ಲಿ ಅಂಟಿದ್ದ ಗೆದ್ದಲು ನಿಧಾನವಾಗಿ ಕಳಚಿ ಉದುರುತ್ತಿದೆ! ಬೇಡವಾದ ಕೊಳಕು, ಭಾರವಾಗಿ ಹೊರಲಾರದ ಹೊರೆಯಾಗಿದ್ದ, ಹೆಣಗಳಂತೆ ಜೋತು ಬಿದ್ದಿದ್ದ ಕಹಿನೆನಪುಗಳ ಒಣಗಿದ ತರಗೆಲೆಗಳು ಎಲ್ಲಾ ಉದುರಿ; ಹೊಸ ಮುಂಗಾರಿಗೆ ಇದೇ ಹೇಸಿಗೆಯ ತರಗೆಲೆಗಳು, ಗೆದ್ದಲು ಮಣ್ಣು ನನ್ನ ಆಳದ ಬೇರುಗಳಿಗೆ ಗೊಬ್ಬರವಾಗಿದೆ! ನಾನು ಇನ್ನೂ ಸೊಂಪಾಗಿ ಬೆಳೆಯುತ್ತಿದ್ದೇನೆ! ಈ ಮುಂಗಾರಿಗೆ ಹೊಸ ಚಿಗುರೆಲೆಗಳು ಮೂಡುತ್ತಿವೆ.!

ಕಾಲನ ಋತು ಚಕ್ರದ ಯಾವುದೋ ತಿರುವಿನಲ್ಲಿ ನಾನು ಎಲ್ಲೋ ಮರೆತುಹೋಗಿದ್ದ ನನ್ನ ನಗು, ಮುಗ್ದತೆ, ಪ್ರೀತಿ, ಸುಖ ನಿದ್ದೆ ಮತ್ತೆ ಅರಸಿ ಬಂದು ಚಿಟ್ಟೆಗಳಾಗಿ ನನ್ನನ್ನಾವರಿಸುತ್ತಿವೆ! ಕರಾಳ ಬೇಸಿಗೆ ನನ್ನ ಎಲ್ಲಾ ಕೊಳಕನ್ನು ಕಳಚಿ ನಗ್ನವಾಗಿಸಿದೆ. ಈ ಮುಂಗಾರು ನನ್ನ ಬಾಲ್ಯವನ್ನು ಹಿಂದಿರುಗಿಸುತ್ತಿದೆ.

ಬದುಕೇ ಹೀಗೆ ಅಲ್ಲವೇ?

ಮಳೆಗಾಲವು ಪ್ರಕೃತಿ ಮತ್ತು ಜೀವಜಾಳಕ್ಕೆ ಹೊಸ ಚೈತನ್ಯವನ್ನು ತರುತ್ತದೆ. ಚಳಿಗಾಲವೂ ಬದುಕನ್ನು ಸಂಭ್ರಮಿಸುವಂತೆ ಮಾಡುತ್ತದೆ, ತಂಪಿನಲ್ಲೂ ಬದುಕನ್ನು ಬೆಚ್ಚಾಗಿರಿಸುತ್ತದೆ. ಮತ್ತು ಬೇಸಿಗೆಗಾಲವೂ ತನ್ನ ತಾಪಕ್ಕೆ ಎಲ್ಲವನ್ನೂ ಹಿಂಡಿ, ಹಿಂಗಿಸಿ, ಕುಗ್ಗಿಸಿಬಿಡುತ್ತದೆ!!

ಮತ್ತೆ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಗಾಲ... ಈ ಕ್ರಿಯೆ ನಿರಂತರ...

ಈಗೆಯೇ ಬದುಕಿನಲ್ಲೂ ಒಂದು ಋತುಚಕ್ರ ತಿರುಗುತ್ತಿರುತ್ತದೆ! ಈ ಎಲ್ಲಾ ಋತುಗಳ ಮಧ್ಯೆಯೇ ಬದುಕು ಸಾಗಬೇಕು ಮತ್ತು ಸಾಗುತ್ತದೆ! ಅದೇ ಬದುಕನ್ನು ಇನ್ನೂ ಸ್ವಾರಸ್ಯ ಭರಿತವಾಗಿ ಇರಿಸಿರುವುದು. ಕಷ್ಟ, ಸುಖ, ದುಖಃ, ವಿರಹ, ಬೇಸರ, ಒತ್ತಡ, ನಗು, ಪ್ರೀತಿ ಈಗೆ ಬದುಕಿನ ಎಲ್ಲಾ ಏರಿಳಿತಗಳನ್ನೂ ಮುಟ್ಟಿಸಿ ಮತ್ತೆ ಒಂದು ಸಮಾನಾಂತರ ಗೆರೆಗೆ ತಂದು ನಿಲ್ಲಿಸಿ ಸಾಕ್ಷಾತ್ಕರಿಸುವ ಬದುಕು, ಮತ್ತೆ ಅದೇ ಸುಳಿಯಲ್ಲಿ ಗಿರಿಗಿಟ್ಲೆಹೊಡೆಸಿ ನಮ್ಮನ್ನು ಪರಿಪೂರ್ಣ ಮಾಡುವ ಅನುಭವಗಳ ಧಾರೆ ಎರೆಯುವುದು ಎಷ್ಟು ವಿಚಿತ್ರ!!

"ಬದುಕು" ಎನ್ನುವ ಮೇಷ್ಟ್ರು ಕಲಿಸುವ ಪಾಠ ದೊಡ್ಡದು! ಸಾಯುವ ಕೊನೆಗಳಿಗೆಯವರೆಗೂ ನಮ್ಮನ್ನು ವಿಧ್ಯಾರ್ಥಿಯನ್ನಾಗಿ ಇರಿಸಿರುತ್ತದೆ!

ಬದುಕಿನ ಬಗ್ಗೆ ಮಾತನಾಡುತ್ತಾ ಕುಳಿತರೆ ಇದು ಬರೀ ಅಚ್ಚರಿಯ, ಪ್ರಶ್ನೆಗಳ ಹಾಗೂ ಕುತೂಹಲದ ರಾಶಿ ರಾಶಿ ಮೂಟೆಗಳು! ಎಂದೂ ಮುಗಿಯದ ಸಾಲುಗಳು!

ಈ ಎಲ್ಲದರ ನಡುವೆ ಬೀಳುತ್ತಾ, ಏಳುತ್ತಾ, ಜೀಕುತ್ತಾ ಇನ್ನಷ್ಟು ಸ್ವಾರಸ್ಯಭರಿತವಾಗಿ ಬದುಕನ್ನು ಕಟ್ಟಿಕೊಳ್ಳುವುದು ನಮ್ಮದೇ ಜವಾಬ್ದಾರಿ!

ಈ ಮಳೆಗಾಲ ನನ್ನ ಬಳಗದವರೆಲ್ಲರಿಗೂ ಹೊಸ ಚೈತನ್ಯ ತರಲೆಂದು ಆಶಿಸುತ್ತೇನೆ.

ಈ ನನ್ನ ಎಲ್ಲಾ ಒತ್ತಡಗಳ ನಡುವೆ ನನ್ನ ಬ್ಲಾಗು ನೆನೆಗುದಿಗೆ ಬಿದ್ದಿರುವುದನ್ನು ನಾನು ಗಮನಿಸಿದೆ! ಇನ್ನುಮುಂದೆ ಖಂಡಿತವಾಗಿಯೂ ತಿಂಗಳಿಗೆ ಕನಿಷ್ಟ ಒಂದು ಬರಹವನ್ನು ತಪ್ಪದೇ ಬರೆಯುತ್ತೇನೆ. ಈ ಬ್ಲಾಗನ್ನು ಕೇವಲ ಛಾಯಾಗ್ರಹಣ, ವನ್ಯಜೀವಿ, ಪಕ್ಷಿ ಕಲರವ ಮತ್ತು ಪರಿಸರಕ್ಕೆ ಸಂಭಂದಿಸಿದ ಬರಹಗಳಿಗೆ ಸಿಮಿತಿಗೊಳಿಸಲು ನಿರ್ಧರಿಸಿದ್ದೇನೆ. ಇತರೆ ಬರಹಗಳಿಗೆ ಶೀಘ್ರವೇ ಇನ್ನೊಂದು ಬ್ಲಾಗು ಪ್ರಾರಂಭಿಸಲು ಚಿಂತಿಸುತ್ತಿದ್ದೇನೆ.

ಗೌರೀಶ ಕಪನಿ