About Me

Friday, February 15, 2008

ಮೈದನ ಹಳ್ಳಿಯಲ್ಲಿ ಕೃಷ್ಣಮೃಗಗಳು...

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿಗೆ ಸೇರಿದ ಮೈದನಹಳ್ಳಿಯಲ್ಲಿ ಕೃಷ್ಣಮೃಗಗಳನ್ನು ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಸಂರಕ್ಷಿಸಿಕೊಂಡು ಬಂದಿದೆ. ಒಂದು ಅಂದಾಜಿನ ಪ್ರಕಾರ ಸುಮಾರು 1500 ರಿಂದ 2000 ದಷ್ಟು ಸಂಖ್ಯೆಯಲ್ಲಿ ಕೃಷ್ಣಮೃಗಗಳು ಇದ್ದು, ಸುಮಾರು 3 ಕಿ.ಮೀ ವ್ಯಾಪ್ತಿಯಲ್ಲಿ ಈ ರಕ್ಷಿತ ವನ ವಿಸ್ತಾರವಾದ ಹುಲ್ಲುಗಾವಲು ಪ್ರದೇಶದಲ್ಲಿದೆ. ಬೆಂಗಳೂರಿನಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ಮೈದನಹಳ್ಳಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಲ್ಲದೆ ತನ್ನ ಶಾಂತಿ ಮತ್ತು ಪ್ರಶಾಂತತೆಯನ್ನು ಉಳಿಸಿಕೊಂಡಿದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ ಹೊರಟು ತುಮಕೂರು ರಸ್ತೆಯ ಮೂಲಕ ನೆಲಮಂಗಲ ದಾಟಿ 70 ಕಿ.ಮೀ. ದೂರದ ತುಮಕೂರು ತಲುಪಬೇಕು. ಅಲ್ಲಿಂದ ಮಧುಗಿರಿ ರಸ್ತೆಯ ಮೂಲಕ ಮುಂದೆ ಸಾಗಿದರೆ 40 ಕಿ.ಮೀ. ಬಳಿಕ ಮಧುಗಿರಿ ತಲುಪುತ್ತೇವೆ. ಅಲ್ಲಿಂದ ಹಿಂದೂಪುರ ರಸ್ತೆಯಲ್ಲಿ ಸುಮಾರು 18 ಕಿ.ಮೀ. ಸಾಗಿದ ಬಳಿಕ ಪುರವರ ಎಂಬ ಊರಿನ ವೃತ್ತ ತಲುಪುತ್ತೇವೆ. ಅಲ್ಲಿಂದ ಎಡಕ್ಕೆ ತಿರುಗಿ ಸುಮಾರು 6 ಕಿ.ಮೀ. ಸಾಗಿದ ಬಳಿಕ ಬಲಕ್ಕೊಂದು ಸಣ್ಣ ಮಣ್ಣಿನ ರಸ್ತೆ ಸಿಗುತ್ತದೆ. ಅದೇ ರಸ್ತೆಯಲ್ಲಿ ಸುಮಾರು 2 ಕಿ.ಮೀ. ಸಾಗಿದರೆ ಮೈದನಹಳ್ಳಿಯ ಕೃಷ್ಣಮೃಗ ರಕ್ಷಿತ ವನ ಸಿಗುತ್ತದೆ...

ಕೃಷ್ಣಮೃಗ:

ಕೃಷ್ಣಮೃಗವು ಬಹಳ ಹೆದರಿಕೆಯ ಅಥವಾ ನಾಚಿಕೆಯ ಸ್ವಾಭಾವವನ್ನು ಹೊಂದಿದೆ. ಮನುಷ್ಯರ ಚಲನವಲನವನ್ನು ಬಹಳ ದೂರದಿಂದಲೇ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತದೆ. ಕೃಷ್ಣಮೃಗಗಳ ಚಿತ್ರ ಕ್ಲಿಕ್ಕಿಸಲು ಬಹಳ ಹೆಣಗಾಡಬೇಕಾಯಿತು. ಅಲೆದು ಅಲೆದು ಸುಸ್ತಾಗಿದ್ದು ಬಿಟ್ಟರೆ ಒಳ್ಳೆಯ ಚಿತ್ರ ಮಾತ್ರ ಕ್ಲಿಕ್ಕಿಸಲಾಗಲಿಲ್ಲ, ಮುಂದೆ ಮತ್ತೊಮ್ಮೆ ಪ್ರಯತ್ನಿಸಬೇಕು.

ಕೃಷ್ಣಮೃಗಳು ಬಾಲ್ಯದಲ್ಲಿ ಚಿನ್ನದ ಬಣ್ಣದಲ್ಲಿದ್ದು, ಪ್ರೌಢಾವಸ್ಥೆಯಲ್ಲಿ ಕೃಷ್ಣ ವರ್ಣಕ್ಕೆ ತಿರುಗುತ್ತದೆ. ಹುಲ್ಲನ್ನು ತಿಂದು ಇವು ಬದುಕುತ್ತದೆ. ಇವುಗಳು ಸಾಮಾನ್ಯ ಗುಂಪುಗಳಲ್ಲಿ ತಿರುಗುತ್ತವೆ. ಪ್ರೌಢ ಹೆಣ್ಣು ಕೃಷ್ಣಮೃಗ ಗುಂಪಿನ ಸಾರಥ್ಯ ವಹಿಸುತ್ತದೆ. ಮನುಷ್ಯರ ರೀತಿಯಲ್ಲಿ ಸರ್ವ ಋತುವಿನಲ್ಲಿಯೂ ಸಂತಾನಾಭಿವೃದ್ದಿಯಲ್ಲಿ ತೊಡಗುತ್ತದೆ. ಆದರೂ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಸಂತಾನಾಭಿವೃದ್ದಿಯಲ್ಲಿ ತೊಡಗುತ್ತವೆ. ಕೃಷ್ಣಮೃಗಗಳು ಬೆಳಗ್ಗೆ ಆಹಾರ ಹುಡುಕಾಟದಲ್ಲಿ ತೊಡಗಿ ಮದ್ಯಾಹ್ನದಲ್ಲಿ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತವೆ, ಮತ್ತೆ ಸಂಜೆ ಆಹಾರ ಸೇವನೆ ಪ್ರಾರಂಭ.

ಪಕ್ಷಿಲೋಕ ಮತ್ತು ಪರಿಸರ:

ತುಮಕೂರು ದಾಟಿ ಮಧುಗಿರಿಯ ಹಾದಿ ಹಿಡಿದ ಕೂಡಲೇ ನಮ್ಮ ಕಣ್ಣು ಮನಸ್ಸು ಸೆರೆ ಹಿಡಿಯುವುದು ಅಲ್ಲಿನ ಪರಿಸರ, ಬೆಟ್ಟ ಸಾಲು ಮತ್ತು ಪಕ್ಷಿಗಳು. ದಾರಿಯಲ್ಲಿ ಸಾಗುತ್ತಾ ಎಡಬಲದಲ್ಲಿ ಅತಿ ಸುಂದರವಾದ ಬೆಟ್ಟಸಾಲುಗಳು ಮತ್ತು ಅಲ್ಲಿನ ಕಲ್ಲು ಬಂಡೆಗಳು, ಯಾರೋ ಅದ್ಬುತವಾಗಿ ವಿನ್ಯಾಸಮಾಡಿ ತುಂಬಾ ಅಚ್ಚುಕಟ್ಟಾಗಿ ಜೋಡಿಸಿದಂತೆ ಕಾಣುವ ಬಂಡೆಗಳೇ ಸುಂದರ. ದಾರಿಯಲ್ಲಿ ನಮಗೆ ತುಂಬಾ ಕೆರೆಗಳು ನೋಡಸಿಗುತ್ತವೆ. ಹಾಗೇ ನಾವು ಅಕಸ್ಮಾತ್ ಬೇಟಿ ನೀಡಿದ ಕೆರೆ "ಥರಟಿ" ಹಳ್ಳಿಯ ಸಮೀಪದ "ಅಗ್ರಹಾರ ಕೆರೆ" ಅದು ತನ್ನ ಒಡಲಲ್ಲಿ ಒಂದು ಸಣ್ಣ ಪಕ್ಷಿಲೋಕವನ್ನೇ ಇಟ್ಟುಕೊಂಡಿದೆ. ಕೆರೆಯ ಅಕ್ಕಪಕ್ಕ ತುಂಬಾ ಪಕ್ಷಿಗಳು ಜೀವಿಸುತ್ತಿದ್ದು ಅಲ್ಲಿನ ಕಲರವ ಕೇಳಿ ಆನಂದಿಸುವುದೇ ಅದ್ಬುತ ಸಂಗತಿ. ಬೆಂಗಳೂರಿನ ಧೂಳು, ಹೊಗೆ, ಗಲಾಟೆ ಮತ್ತು ಒತ್ತಡದಿಂದ ಬೇಸತ್ತಾಗ ಹಾಗೇ ಸುಮ್ಮನೆ ಒಂದು ದಿನ ಈ ಪ್ರದೇಶದಲ್ಲಿ ಕಳೆದು ಬನ್ನಿ. ವ್ಯತ್ಯಾಸ ನಿಮಗೆ ತಿಳಿಯುತ್ತದೆ.
ನೆನಪಿರಲಿ, ನಿಮ್ಮ ಭೇಟಿ ಅಲ್ಲಿನ ಪರಿಸರಕ್ಕೆ ಹಾನಿತರದಿರಲಿ...

- ಸಾಮಾನ್ಯ