About Me

Friday, July 1, 2011

"ಬದುಕು" ಎನ್ನುವ ಮೇಷ್ಟ್ರು


ಕಳೆದ ಆರು ತಿಂಗಳಲ್ಲಿ ಎಷ್ಟೆಲ್ಲಾ ಒತ್ತಡಗಳು, ಏರಿಳಿತಗಳ ನಡುವೆ ಈಗ ಕೊಂಚ ಬಿಡುವಾಗಿದೆ. ಕೆಲಸದ ಗೊಂದಲ, ಹೊಸ ಕೆಲಸ, ಕಂಪನಿ, ಹೊಸ ಜಾಗ, ಜನ! ವರ್ಷಗಳಿಂದ ಹದಗೆಟ್ಟ ಬದುಕು ಈಗ ನಿಧಾನಗತಿಯಲ್ಲಿ ಸ್ಥಿಮಿತಕ್ಕೆ ಬರುತ್ತಿದೆ. ಇಂಥದ್ದೊಂದು ಬದಲಾವಣೆಗೆ ಮನಸ್ಸು ಹಾತೊರೆಯುತ್ತಿತ್ತು. ಗೆದ್ದಲು ಹಿಡಿದಿದ್ದ ಬದುಕು ಹೊಸ ಮಳೆಯನ್ನು ಕಂಡಿದೆ. ಆ ಮಳೆಯಲ್ಲಿ ಅಂಟಿದ್ದ ಗೆದ್ದಲು ನಿಧಾನವಾಗಿ ಕಳಚಿ ಉದುರುತ್ತಿದೆ! ಬೇಡವಾದ ಕೊಳಕು, ಭಾರವಾಗಿ ಹೊರಲಾರದ ಹೊರೆಯಾಗಿದ್ದ, ಹೆಣಗಳಂತೆ ಜೋತು ಬಿದ್ದಿದ್ದ ಕಹಿನೆನಪುಗಳ ಒಣಗಿದ ತರಗೆಲೆಗಳು ಎಲ್ಲಾ ಉದುರಿ; ಹೊಸ ಮುಂಗಾರಿಗೆ ಇದೇ ಹೇಸಿಗೆಯ ತರಗೆಲೆಗಳು, ಗೆದ್ದಲು ಮಣ್ಣು ನನ್ನ ಆಳದ ಬೇರುಗಳಿಗೆ ಗೊಬ್ಬರವಾಗಿದೆ! ನಾನು ಇನ್ನೂ ಸೊಂಪಾಗಿ ಬೆಳೆಯುತ್ತಿದ್ದೇನೆ! ಈ ಮುಂಗಾರಿಗೆ ಹೊಸ ಚಿಗುರೆಲೆಗಳು ಮೂಡುತ್ತಿವೆ.!

ಕಾಲನ ಋತು ಚಕ್ರದ ಯಾವುದೋ ತಿರುವಿನಲ್ಲಿ ನಾನು ಎಲ್ಲೋ ಮರೆತುಹೋಗಿದ್ದ ನನ್ನ ನಗು, ಮುಗ್ದತೆ, ಪ್ರೀತಿ, ಸುಖ ನಿದ್ದೆ ಮತ್ತೆ ಅರಸಿ ಬಂದು ಚಿಟ್ಟೆಗಳಾಗಿ ನನ್ನನ್ನಾವರಿಸುತ್ತಿವೆ! ಕರಾಳ ಬೇಸಿಗೆ ನನ್ನ ಎಲ್ಲಾ ಕೊಳಕನ್ನು ಕಳಚಿ ನಗ್ನವಾಗಿಸಿದೆ. ಈ ಮುಂಗಾರು ನನ್ನ ಬಾಲ್ಯವನ್ನು ಹಿಂದಿರುಗಿಸುತ್ತಿದೆ.

ಬದುಕೇ ಹೀಗೆ ಅಲ್ಲವೇ?

ಮಳೆಗಾಲವು ಪ್ರಕೃತಿ ಮತ್ತು ಜೀವಜಾಳಕ್ಕೆ ಹೊಸ ಚೈತನ್ಯವನ್ನು ತರುತ್ತದೆ. ಚಳಿಗಾಲವೂ ಬದುಕನ್ನು ಸಂಭ್ರಮಿಸುವಂತೆ ಮಾಡುತ್ತದೆ, ತಂಪಿನಲ್ಲೂ ಬದುಕನ್ನು ಬೆಚ್ಚಾಗಿರಿಸುತ್ತದೆ. ಮತ್ತು ಬೇಸಿಗೆಗಾಲವೂ ತನ್ನ ತಾಪಕ್ಕೆ ಎಲ್ಲವನ್ನೂ ಹಿಂಡಿ, ಹಿಂಗಿಸಿ, ಕುಗ್ಗಿಸಿಬಿಡುತ್ತದೆ!!

ಮತ್ತೆ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಗಾಲ... ಈ ಕ್ರಿಯೆ ನಿರಂತರ...

ಈಗೆಯೇ ಬದುಕಿನಲ್ಲೂ ಒಂದು ಋತುಚಕ್ರ ತಿರುಗುತ್ತಿರುತ್ತದೆ! ಈ ಎಲ್ಲಾ ಋತುಗಳ ಮಧ್ಯೆಯೇ ಬದುಕು ಸಾಗಬೇಕು ಮತ್ತು ಸಾಗುತ್ತದೆ! ಅದೇ ಬದುಕನ್ನು ಇನ್ನೂ ಸ್ವಾರಸ್ಯ ಭರಿತವಾಗಿ ಇರಿಸಿರುವುದು. ಕಷ್ಟ, ಸುಖ, ದುಖಃ, ವಿರಹ, ಬೇಸರ, ಒತ್ತಡ, ನಗು, ಪ್ರೀತಿ ಈಗೆ ಬದುಕಿನ ಎಲ್ಲಾ ಏರಿಳಿತಗಳನ್ನೂ ಮುಟ್ಟಿಸಿ ಮತ್ತೆ ಒಂದು ಸಮಾನಾಂತರ ಗೆರೆಗೆ ತಂದು ನಿಲ್ಲಿಸಿ ಸಾಕ್ಷಾತ್ಕರಿಸುವ ಬದುಕು, ಮತ್ತೆ ಅದೇ ಸುಳಿಯಲ್ಲಿ ಗಿರಿಗಿಟ್ಲೆಹೊಡೆಸಿ ನಮ್ಮನ್ನು ಪರಿಪೂರ್ಣ ಮಾಡುವ ಅನುಭವಗಳ ಧಾರೆ ಎರೆಯುವುದು ಎಷ್ಟು ವಿಚಿತ್ರ!!

"ಬದುಕು" ಎನ್ನುವ ಮೇಷ್ಟ್ರು ಕಲಿಸುವ ಪಾಠ ದೊಡ್ಡದು! ಸಾಯುವ ಕೊನೆಗಳಿಗೆಯವರೆಗೂ ನಮ್ಮನ್ನು ವಿಧ್ಯಾರ್ಥಿಯನ್ನಾಗಿ ಇರಿಸಿರುತ್ತದೆ!

ಬದುಕಿನ ಬಗ್ಗೆ ಮಾತನಾಡುತ್ತಾ ಕುಳಿತರೆ ಇದು ಬರೀ ಅಚ್ಚರಿಯ, ಪ್ರಶ್ನೆಗಳ ಹಾಗೂ ಕುತೂಹಲದ ರಾಶಿ ರಾಶಿ ಮೂಟೆಗಳು! ಎಂದೂ ಮುಗಿಯದ ಸಾಲುಗಳು!

ಈ ಎಲ್ಲದರ ನಡುವೆ ಬೀಳುತ್ತಾ, ಏಳುತ್ತಾ, ಜೀಕುತ್ತಾ ಇನ್ನಷ್ಟು ಸ್ವಾರಸ್ಯಭರಿತವಾಗಿ ಬದುಕನ್ನು ಕಟ್ಟಿಕೊಳ್ಳುವುದು ನಮ್ಮದೇ ಜವಾಬ್ದಾರಿ!

ಈ ಮಳೆಗಾಲ ನನ್ನ ಬಳಗದವರೆಲ್ಲರಿಗೂ ಹೊಸ ಚೈತನ್ಯ ತರಲೆಂದು ಆಶಿಸುತ್ತೇನೆ.

ಈ ನನ್ನ ಎಲ್ಲಾ ಒತ್ತಡಗಳ ನಡುವೆ ನನ್ನ ಬ್ಲಾಗು ನೆನೆಗುದಿಗೆ ಬಿದ್ದಿರುವುದನ್ನು ನಾನು ಗಮನಿಸಿದೆ! ಇನ್ನುಮುಂದೆ ಖಂಡಿತವಾಗಿಯೂ ತಿಂಗಳಿಗೆ ಕನಿಷ್ಟ ಒಂದು ಬರಹವನ್ನು ತಪ್ಪದೇ ಬರೆಯುತ್ತೇನೆ. ಈ ಬ್ಲಾಗನ್ನು ಕೇವಲ ಛಾಯಾಗ್ರಹಣ, ವನ್ಯಜೀವಿ, ಪಕ್ಷಿ ಕಲರವ ಮತ್ತು ಪರಿಸರಕ್ಕೆ ಸಂಭಂದಿಸಿದ ಬರಹಗಳಿಗೆ ಸಿಮಿತಿಗೊಳಿಸಲು ನಿರ್ಧರಿಸಿದ್ದೇನೆ. ಇತರೆ ಬರಹಗಳಿಗೆ ಶೀಘ್ರವೇ ಇನ್ನೊಂದು ಬ್ಲಾಗು ಪ್ರಾರಂಭಿಸಲು ಚಿಂತಿಸುತ್ತಿದ್ದೇನೆ.

ಗೌರೀಶ ಕಪನಿ

Thursday, April 14, 2011

ಧನ್ಯವಾದಗಳು - Thank You!

ಪ್ರಿಯರೇ,

ಬನದ ಬದುಕು ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ನಿಮ್ಮೆಲ್ಲರ ಪ್ರೀತಿ, ಹಾರೈಕೆಗಳಿಂದ ಯಶಸ್ವಿಯಾಗಿದೆ. ತಮ್ಮ ದಿನ ನಿತ್ಯದ ರಗಳೆಗಳಲ್ಲಿಯೂ ಬಿಡುವು ಮಾಡಿಕೊಂಡು ಪ್ರದರ್ಶನಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ನಾವು ಆಭಾರಿಯಾಗಿದ್ದೇವೆ. ನಿಮ್ಮ  ಪರಿಸರ ಪ್ರೀತಿಯ ಜೀವಂತಿಕೆ ಸಾಕ್ಷಿ ಈ ಪ್ರದರ್ಶನದ ಯಶಸ್ಸು. 

ಸಣ್ಣ ಮಕ್ಕಳು, ಶಾಲಾ ವಿಧ್ಯಾರ್ಥಿಗಳು, ಯುವಕ - ಯುವತಿಯರು, ಮದ್ಯವಯಸ್ಕರು, ಹಿರಿಯರು ಎಲ್ಲರೂ ಪ್ರಕೃತಿಯ ಸೊಬಗ ಮುಂದೆ ಮುಗ್ದ ಮನಸ್ಕರಾಗಿ ಅವರ ಕಣ್ಣಂಚಿನ ಆಶ್ಚರ್ಯ ಮತ್ತು ಆನಂದದ ಬೆಳಕು ನಮಗೆ ಕಂಡಿತು!

ಅಲ್ಲಿಗೆ, ನಮ್ಮ ಶ್ರಮ ಸಾರ್ಥಕ!

ಪರಿಸರ ಪ್ರೇಮಿಗಳಿಗೆ, ಮಾದ್ಯಮ ಮಿತ್ರರಿಗೆ, ನಮ್ಮ ಬಳಗದ ಗೆಳೆಯರಿಗೆ, ನಮ್ಮನ್ನು ಸಹಿಸಿಕೊಂಡು ಪ್ರೋತ್ಸಾಹಿಸಿದ ಕುಟುಂಬದವರಿಗೂ ಹಾಗೂ ಪ್ರದರ್ಶನಕ್ಕೆ ಆಗಮಿಸಿದವರಿಗೂ... ನೇರವಾಗಿ ಹಾಗೂ ಪರೋಕ್ಷವಾಗಿ ನಮ್ಮ ಜೊತೆಗಿದ್ದ ಎಲ್ಲರಿಗೂ ನಮ್ಮ ಕೃತಜ್ಞತೆಗಳು.

ಪ್ರದರ್ಶನದ ವೇಳೆ ಚಿತ್ರಗಳ ಮುಂದೆ ಪ್ರೇಕ್ಷಕರ ಭಾವಾಭಿವ್ಯಕ್ತಿಯ ಕೆಲವು ವೀಡಿಯೊ ತುಣುಕುಗಳನ್ನು ದಾಖಲಿಸಲಾಗಿದೆ. ಅನಿವಾರ್ಯ ಕಾರಣಗಳಿಂದ ಬರಲಾರದ ಪ್ರಿಯರಿಗೆ ಒಂದು ಸಣ್ಣ ವೀಡಿಯೊ ತುಣುಕು.





ಕಾಮೆಂಟ್ ಪುಸ್ತಕದಲ್ಲಿ ಪ್ರೇಕ್ಷಕರು - ಪರಿಸರ ಪ್ರಿಯರು ಬರೆದ ಕೆಲವು ಆಯ್ದ ಸುಂದರ ಕಾಮೆಂಟುಗಳು!

"Conservation and Protection of Wildlife has been hidden in the photography of Lokesh Mosale and Gowreesh Kapani. The exhibition is unique and educative"
- Kumar, ACF

"ಬನವನ್ನೇ ಬೆಂಗಳೂರಿಗೆ ತಂದಂತಿದೆ. ಅತ್ಯುತ್ತಮ ಛಾಯಾಚಿತ್ರಗಳು, ಪಕ್ಷಿಗಳು, ಪ್ರಾಣಿಗಳು, ಪ್ರಕೃತಿಯ ಕಾಡುಗಳನ್ನು ಅದೆಷ್ಟು ಮುಗ್ದವಾಗಿ, ಸಹಜವಾಗಿ ಪ್ರಕಟಪಡಿಸುತ್ತವೆ! ಗೌರೀಶ್ - ಲೋಕೇಶ್ ಅವರ ಈ ಉತ್ಕೃಷ್ಟ ಪ್ರಯತ್ನ ಕಾಂಕ್ರಿಟ್ ಕಾಡಿನಲ್ಲಿರುವವರಿಗೆ ಕಾಡಿನ ಮೋಹ ಬೆಳೆಸಲಿ. ಕಾಡು ರಕ್ಷಣೆಯ ಬದ್ದತೆಯನ್ನು ಮೂಡಿಸಲಿ."
- ಈ. ವೀರೇಶ್ 

"Where a thousand words are spelt.... in each snap!"
- Prasad. YPS

"ಬನದ ಬದುಕು ಬೆಂಗಳೂರಲ್ಲೂ ಲಭ್ಯ!!"
- ಶರಶ್ಚಂದ್ರ 

"Very good work, Very Difficulty to catch those special moments in the wild"
- TNA Perumal

"ಬನದ ಬದುಕು ಸಾರ್ಥಕ!"
- ಸುಗುಣ ಸಾಗ್ಗೆರೆ ರಾಮು 

"ಚೆನ್ನಾಗಿದೆ ಅಂತ ಹೇಳ್ತೀನಿ. ಆದರೆ ಈ ಅಕ್ಷರಗಳು ನನ್ನೊಳಗಿನ ಅನಿಸಿಕೇನ ವ್ಯಕ್ತಪಡಿಸಲು ಸೋಲ್ತಿವೆ, ಹಾಗಾಗಿ ಇನ್ನೇನು ಹೇಳ್ಬೇಕು ಗೊತ್ತಿಲ್ಲ!"  
- ಪಿ.ವಿ. ನಂಜರಾಜೇಅರಸು 

"ವರ್ಣಿಸದಿದ್ದರೆ ನೀನೆ ಎಲ್ಲಾ, ವರ್ಣಿಸಲು ಹೋದರೆ ನಿನ್ನ ಅಂದ ಸೀಮಿತ ಶಬ್ದಗಳಲ್ಲಿ ವರ್ಣಿಸಿದಂತಾಗುತ್ತೆ!"
- ಅದೀಬ್ ಅಕ್ತರ್ 

"Changed my view of wildlife here, Thanks!"
- Aneesh

"Thought provoking photography"
- Dr. S. Ramesh

"I like this all, because its very nice!"
- Monali

"ಲೋಕೇಶ್, ನಿಮ್ಮ ಜೊತೆ ಕಾಡಿಗೆ ಹೋಗಿ ಬಂದ ಅನುಭವ ಆಗಿದೆ!"
- ಶಿವಸುಬ್ರಮಣ್ಯ 
















ನಿಮ್ಮ ಪ್ರೀತಿಗೆ ನಾವು ಆಭಾರಿ!

ಗೌರೀಶ್ ಕಪನಿ
ಲೋಕೇಶ್ ಮೊಸಳೆ