About Me

Wednesday, July 8, 2009

ಚಿಟವಕ್ಕಿಯ ಶಾಪ ಮತ್ತು ನನ್ನ ಪರದಾಟ

ಎಂದಿನಂತೆ ಭಾನುವಾರ ನನ್ನ ಕೆಮೆರಾಹೆಗಲಿಗೇರಿಸಿಕೊಂಡು ಕೆರೆಯ ಅಂಚಲ್ಲಿ ಅಲೆಯುತ್ತಿದ್ದೆ. ಯಾಕೋ ಅಂದು ಛಾಯಾಚಿತ್ರದಲ್ಲಿ ಆಸಕ್ತಿಯೇ ಇರಲಿಲ್ಲ, ಅದಕ್ಕೆ ಪೂರಕವಾಗಿ ಅಂದು ಯಾರೂ ನನ್ನ ಕೆಮೆರಾಗೆ ಅತಿಥಿಯೂ ಆಗಲಿಲ್ಲ. ಅದೇ ಬೇಸರದಲ್ಲಿ ಕೆರೆಯ ಮತ್ತೊಂದು ಅಂಚಿನಲ್ಲಿ ಸುಮ್ಮನೆ ತಂಪಾದ ಗಾಳಿಯನ್ನು ಆನಂದಿಸುತ್ತಾ ನೆಡೆಯುತ್ತಿದ್ದೆ. ಯಾರೋ ಆಚೆ ದಡದಲ್ಲಿ ಕುಂಡೆಅಲುಗಾಡಿಸುತ್ತ ಕಳ್ಳ ಹೆಜ್ಜೆ ಇಡುತ್ತಿದ್ದವರ ಕಂಡೆ! ಕುತೂಹಲಗೊಂಡು ಗಮನಿಸುತ್ತಾ ನಿಂತೆ... ಅವರ ಗುರುತು ಸಿಗಲಿಲ್ಲ. ಸೈನಿಕರು ಯುದ್ದಭೂಮಿಯಲ್ಲಿ ಮಲಗಿ ತೆವಳುವಂತೆ ಹತ್ತಿರ ಹೋದೆ. ಅನಾಮಿಕನ ಪರಿಚಯ ನನಗೆಇರಲಿಲ್ಲ.


"Pratincole" ಮೊದಲ ನೋಟದಲ್ಲೆ ಮನಸೆಳೆವ ಸೌಂದರ್ಯ, ಕಣ್ಣಿಗೆ ಬಿಳಿ ಕಾಡಿಗೆ, ಕೊಕ್ಕಿನಲ್ಲೊಂದಿಷ್ಟು lips stick. ಅತಿ ಬಿಳಿಯೂ ಅಲ್ಲದ, ಕಪ್ಪು, ಕಂದೂ ಅಲ್ಲದ ಕಾದು ಕಾದು ರಂಗಾದ ಕೆನೆಯಂತಿರುವ ಮೈಕಾಂತಿ.

ಒಂದು ತಿಂಗಳ ಬಳಿಕವೂ ಹಕ್ಕಿಯ ವ್ಯಾಮೋಹ ಹೋಗಲಿಲ್ಲ. ಮತ್ತೆ ಅದೇ ಜಾಗಕ್ಕೆ ಹುಡುಕುತ್ತಾ ಹೊರಟೆ. ಅದೇ ಎರಡು ದಿನಗಳ ಹಿಂದೆ ಬರ್ಜರಿಮಳೆಯಾಗಿ ಕೆರೆಯ ಮಣ್ಣೆಲ್ಲಾ ಕೆಸರಾಗಿ ಜಾರುತಿತ್ತು. ನನ್ನ Gypsy ಮೇಲಿನ ಅತಿಯಾದ ಭರವಸೆಯೊಂದಿಗೆ ಕೆರೆಯ ಅಂಚಿನಲ್ಲಿ, ನೀರಿನಲ್ಲಿ, ಕೆಸರಿನಲ್ಲಿ ಓಡಿಸುತ್ತಾ ಹಳ್ಳಕ್ಕಿಳಿಸಿ ಹೇಗೋ ಮುಂದೆ ಬಂದೆ; ಖುಷಿಪಟ್ಟೆ. Gypsyಯಿಂದಾಗಿ off road driving ಹುಚ್ಚು ಹೆಚ್ಚಾಗಿದೆ!

ಕಳೆದೆ ಬಾರಿ ಭೇಟಿಯಾಗಿದ್ದ ಜಾಗದಲ್ಲಿ ಹುಡುಕತೊಡಗಿದೆ, ಎಲ್ಲೂ ಕಾಣಲಿಲ್ಲ. ಬೇಸರದಲ್ಲೇಸುಮ್ಮನಾಗಿ ಕೆರೆ ನೋಡುತ್ತಾ ನಿಂತೆ. ಜೊತೆಗಿದ್ದ ಗೆಳೆಯನಿಗೆ ಅಲ್ಲೇ ಓಡಾಡುತ್ತಿದ್ದ ಕೊಕ್ಕರೆ ಖುಷಿಕೊಡುತ್ತಿತ್ತು, ಅವನನ್ನು ಅಲ್ಲೇ ಬಿಟ್ಟು ನಾನು ಮುಂದೆ ಸಾಗಿದೆ.

ಹತ್ತಿರತ್ತಿರ ಮಣ್ಣಿನ ಬಣ್ಣಕ್ಕೆ ಸನಿಹದಲ್ಲೆ ಇರುವ Pratincole ಹತ್ತಿರದಲ್ಲೆ ಇದ್ದರೂ ಗಮನಿಸದೇ ನನ್ನ Gypsyಯನ್ನು ನಿಲ್ಲಿಸಿದ್ದೆ. ಇಲ್ಲೇ ಪಕ್ಕದಲ್ಲಿಏನೋ ಸದ್ದು ಕೇಳಿಸಿ ನೋಡಿದರೆ, ಕುಂಡೆ ಕುಲುಕಿ ಕಿ..ರ್..ರ್... ಕಿ..ರ್..ರ್... ಎನ್ನುತ್ತಿದೆ. ಕಂಡ ಸಂತೋಷಕ್ಕೆ ಗಾಡಿಯನ್ನು ಬಂದ್ ಮಾಡಿ ನೋಡುತ್ತಾ ಕುಳಿತೆ. ಸ್ವಲ್ಪ ಸಮಯದ ನಂತರ ಗಮನಿಸಿದರೆ ಅಲ್ಲಿ ದೊಡ್ಡ ದಂಡೇ ಇದೆ!! ಅವುಗಳ ಕಾಲನಿಯಲ್ಲಿ ನನ್ನ ಕಂಡು ಕೊಂಚ ಗೊಂದಲಗೊಂಡು ಎಲ್ಲವೂ ನನ್ನೇ ನೋಡಿ ನಿಂತು; ಯಾರಿವನು dream boy ಎಂದು ಚರ್ಚೆ ಪ್ರಾರಂಭಿಸಿದಂತೆ ಅನ್ನಿಸಿತು!


ಗುಂಪಿನಲ್ಲಿ ಒಂದು ಹಕ್ಕಿಯಂತು ನನ್ನ ಇರುವಿಕೆಗೆ ತೀವ್ರ ಅಸಮಧಾನಗೊಂಡು ಧುರುಗುಟ್ಟುತಿತ್ತು. ಸಹಜವಾಗಿಯೇ ನನ್ನ ಗಮನ ಅದರೆಡೆಗೆ ಹೋಯಿತು. ನಾನು ಕೂಡ ಏನಿವಾಗ ಎನ್ನುವರೆಸೆಯಲ್ಲಿ ನೋಡಿದೆ. ಸ್ವಲ್ಪ ಸಮಯದಲ್ಲೇ ಅದರ ರೆಕ್ಕೆಯೊಳಗಿಂದ ಎರಡು ಪುಟ್ಟ ಜೀವಗಳು ಹೊರ ಇಣುಕಿದವು!! ಈಗ ನನಗೆ ಇದರ ಅಸಮಧಾನದ ಕಾರಣ ತಿಳಿಯಿತು. ನಾಲ್ಕೈದು ಸಣ್ಣಕಲ್ಲುಗಳ ಗುಡ್ಡೆ ಸಂದು ತನ್ನ ಮರಿಗಳನ್ನು ಅಡಗಿಸಿಟ್ಟುಕೊಂಡಿದೆ! ನನ್ನ ಕೆಮೆರಾ ಸದ್ದುಮಾಡಲು ಶುರುಮಾಡಿತ್ತು. ಗಾಡಿಯೊಳಗೆ ಕುಳಿತು ಕ್ಲಿಕ್ಕಿಸಿದ angel ನನಗೆ ಸಮಾಧಾನ ಕೊಡಲಿಲ್ಲ. ಕೆಳಗಿಳಿದರೆ ಮಹಾತಾಯಿಗೆ ಇನ್ನೂ ಹೆಚ್ಚು ಕೋಪವೇರಿ, ಕೋಪಕ್ಕೆ ನಾನು ಗುರಿಯಾಗುವ ಸ್ಥಿತಿ. ಉಬಯ ಸಂಕಟದಲ್ಲೇ Gypsyಯಿಂದ ಕೆಳಗಿಳಿದೆ. ನನಗೆ ಹಿಡಿ ಶಾಪವಾಕುತ್ತಾ, ಬೈದಾಡುತ್ತಾ ಗಿರಿಕಿ ಹೊಡೆಯಲು ಶುರು ಮಾಡಿದಳು!

Pratincole ನಾನು ಎಂದಿನಂತೆ ಜಿಪ್ಸಿ ಸಂದಿಯಲ್ಲಿ ಮಲಗಿಕೊಂಡು ಮರಿಗಳ ಚಿತ್ರ ಕ್ಲಿಕ್ಕಿಸಿದೆ. ಈಕೆಯ ಚೀರಾಟ ಗಮನಿಸಿದ ಆಕೆಯ ಪ್ರಿಯಕರನೂ ಬಂದು ನನ್ನ ಸುತ್ತ ಗಿರಕಿ ಹೊಡೆಯಲು ಪ್ರಾರಂಭಿಸಿದ. ಸ್ವಲ್ಪ ಸಮಯ ನಾನು ಹಾಗೆಯೇ ಸ್ತಬ್ದನಾದೆ. ಆಕೆ ಮರಿಗಳ ಹತ್ತಿರ ಕೆಳಗಿಳಿದು ಮರಿಗಳ ಸೇರಿಕೊಂಡಳು. ಆಕೆಯ ಪ್ರಿಯಕರ ಗಿರಕಿಮುಂದುವರಿಸಿದ. ನಾನು ನಿಧಾನಗತಿಯಲ್ಲಿ ಇನ್ನೂ ಸನಿಹವಾಗುವ ಪ್ರಯತ್ನ ನಡೆಸಿದೆ. ಆಕೆಗೆ ಎಲ್ಲಿಲ್ಲದಸಿಟ್ಟು ಬಂದು ಸ್ವಲ್ಪ ದೂರ ಸರಿದಳು, ಈಗ ಏನು ಮಾಡಬಹುದು ಎಂದು ಕಾದು ಕುಳಿತೆ. ಮರಿಗಳು ಯಾವುದೇ ಚಲನೆಯಿಲ್ಲದೆ ಸ್ತಬ್ದವಾಗಿದ್ದವು. ಕಲ್ಲುಗಳ ಜೊತೆ ಅವುಗಳನ್ನುಗುರುತಿಸುವುದೂ ಕಷ್ಟವಾಗಿತ್ತು. ಮರಿಗಳಿಂದ ಸರಿಯಾಗಿ ಎರಡು ಮಾನವನ ಹೆಜ್ಜೆಗಳ ಅಂತರದಲ್ಲಿ ಒಂದು ರೀತಿಯ ಗುಟುರುದನಿಯಲ್ಲಿ ಕೂಗಿದಳು, ಇಲ್ಲಿವರೆಗೂ ಸ್ತಬ್ದವಾಗಿದ್ದ ಮರಿಗಳು ಚಂಗನೆ ಎದ್ದು ತನ್ನ ತಾಯಿಯೆಡೆಗೆ ನಡೆಯಲು ಶುರುಮಾಡಿದವು. ನಡೆಯಲೂ ಆಗದ ಪುಟ್ಟ ಜೀವಗಳು ಹೇಗೋ ಬಿದ್ದು, ಎದ್ದು ತೆವಳಿ ತಾಯಿಯ ರೆಕ್ಕೆಯೊಳಗೆ ಸೇರಿಕೊಂಡವು. ನನ್ನ ಮೇಲೆ ಗಂಡುಹಕ್ಕಿಯ ಹಾರಾಟ, ಚೀರಾಟ ಮುಂದುವರೆದಿತ್ತು. ಸ್ವಲ್ಪ ಚಲನೆಯನ್ನು ನೀಡಿದರೂ ವಿರೋಧ ವ್ಯಕ್ತಪಡಿಸುತ್ತಾ ಆಕ್ರಮಣಕಾರಿಯಾಗಿ ನನ್ನತ್ತ ನುಗ್ಗಿ ಹಿಮ್ಮೆಟ್ಟಿಸುವ ಪ್ರಯತ್ನ ಆತ ಮಾಡುತ್ತಿದ್ದ.


ನಾನು ಮತ್ತೆ ಚಲನೆ ನೀಡದೆ ಮಲಗಿಗಮನಿಸುತ್ತಿದ್ದೆ. ತಾಯಿ ಹಕ್ಕಿಯು ಮತ್ತೆ ಎರಡುಹೆಜ್ಜೆಯಷ್ಟು ದೂರಹೋಗಿ ಅದೇ ಗುಟುರುದನಿಯಲ್ಲಿ ಮರಿಗಳನ್ನು ಕರೆದು ಅಲ್ಲಿಗೆ ತನ್ನಮರಿಗಳನ್ನು ಕರೆಸಿಕೊಂಡಿತು. ಅದರ ಗೂಡಿಂದ ಸುಮಾರು ಆರು ಮಾನವ ಹೆಜ್ಜೆಯಷ್ಟು ಸುರಕ್ಷಿತ ಅಂತರ ಕಾಪಾಡಿಕೊಂಡು ತನ್ನ ರೆಕ್ಕೆಯೊಳಗೆ ತನ್ನಮರಿಗಳನ್ನು ಅವಿತುಕೊಂಡು ಕುಳಿತುಕೊಂಡಿತು.


ಇನ್ನೂ ಹೆಚ್ಚಿಗೆ ತೊಂದರೆಕೊಡಲು ಬಯಸದೇ ಸುಮ್ಮನೆ ಗಮನಿಸುತ್ತಾ ಕುಳಿತೆ. ಅಷ್ಟರೊಳಗೆ ನನ್ನ ಸ್ನೇಹಿತನ ಆಗಮನವಾಯಿತು. ಅವನಲ್ಲಿ ಸಣ್ಣ ವಿಡಿಯೋ ಕೆಮೆರಾ ಇತ್ತು ಅದರ ಸಹಾಯದಿಂದ ನನ್ನ ಮೊದಲನೇ ವಿಡಿಯೋ ಚಿತ್ರೀಕರಣ ಮಾಡಿದೆ. ಮರಿಗಳ ರಕ್ಷಣೆ, ಮರಿಗಳ ತಾಯಿ ಬಳಿಹೋಗುವ ಪರಿ... ವ್ವಾ.. ಪ್ರಕೃತಿ ಮಾತೆಗೆ ಶರುಣು. ವಿಡಿಯೋ ನೋಡಿ.


ನಂತರ ಇಲ್ಲಿಂದ ಹೊರಟು ವಾಪಸ್ಸಾಗುವ ಮನಸ್ಸು ಮಾಡಿ ಹೊರಟೆವು. ಕೆರೆಯ ಅಂಚಿನಲ್ಲಿ ಒಂದು ಹಳ್ಳಕ್ಕೆ ನಮ್ಮ Gypsyಯನ್ನು ಇಳಿಸಿ ಅದು ಅಲ್ಲೇ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿತು. ಮುಂದೆ ಹೋಗಲಾಗದೇ, ಹಿಂದೆಯೂ ಬರಲಾರದೇ ನನ್ನ ಕೈಲಾಗುವುದಿಲ್ಲವೆಂದು ಅಲ್ಲೇ ನಿಂತು ಬಿಟ್ಟಿತು. ಆಗ ಪಕ್ಕದ ಹಳ್ಳಿಗೆ ಸುಮಾರು ಒಂದೂವರೆ ಕಿ.ಮೀ ನೆಡೆದು ಹೋಗಿ ಅಲ್ಲಿ ಒಬ್ಬ ಮಹಾತ್ಮರ ಸಹಾಯ ಪಡೆದು Tractorರನ್ನು ಕರೆಸಿ Gypsyಯನ್ನು ಆಚೆ ಎಳೆಸಿ ಹೇಗೋ ಬೇರೆ ರಸ್ತೆಯಲ್ಲಿ ಹೊರಬಂದೆವು! ಇಷ್ಟಾಗುವಷ್ಟರಲ್ಲಿ ಗುಡ್ಡದ ತುದಿಯಿಂದ ಸೂರ್ಯ ನೆತ್ತಿಯ ಮೇಲೆ ಬಂದಿದ್ದ!

ನಂತರ ಇದು ಮಹಾತಾಯಿಯು ನೀಡಿದ ಶಾಪದ ಫಲವೆಂದು ಯೋಚಿಸುತ್ತಾ ಸಮಾಧಾನಪಟ್ಟುಕೊಂಡೆವು...!

ಈಗ ಮರಿಗಳು ದೊಡ್ಡದಾಗಿವೆ... ಹಾರುವುದ ಕಲಿತಿವೆ.

ನಮ್ಮ ಅಗ್ನಿಯವರು Pratincoleಗೆ "ಕವಲುಬಾಲದ ಚಿಟವ" ಎಂದು ಕನ್ನಡದಲ್ಲಿ ಕರೆದಿದ್ದಾರೆ. ನಾನೂ ಅದೇ ಹೆಸರನ್ನು ಮುಂದುವರಿಸುತ್ತೇನೆ. ಚಿಟವದ ಬಗ್ಗೆ ಕೆಲವು ಮಾಹಿತಿ. ಹಕ್ಕಿಗೆ ನಾಚಿಕೆ ಜಾಸ್ತಿ. ನಿಮ್ಮನ್ನು ಕಂಡ ಕೂಡಲೇ ನಾಚಿ ದೂರಾಗುತ್ತವೆ! ಇವು ಹೆಚ್ಚಾಗಿ ಸಮುದ್ರದ ಅಂಚಲ್ಲಿ ಅಥವಾ ನಿಮ್ಮೂರಿನ ಕೆರೆಯ ಅಂಚಲ್ಲಿ ಕಂಡುಬರುತ್ತವೆ. ಸ್ವಲ್ಪ ಮರುಳು, ಸಣ್ಣ ಕಲ್ಲುಗಳು ಮಿಶ್ರಿತ ಕೊಂಚ ಕೆಸರು ಪ್ರದೇಶ್ ಇಷ್ಟ. ನೀರಿನಲ್ಲಿರುವ ಸಣ್ಣ ಹುಳುಗಳು ಇವಕ್ಕೆ ಆಹಾರ. ಸಣ್ಣ ಹಣ್ಣು ಕಾಯಿಗಳೂ ಪ್ರಿಯ. ಕಣ್ಣಿಗೆ ಬಿಳಿ ಕಾಡಿಗೆ, ಕೊಕ್ಕಿನಲ್ಲೊಂದಿಷ್ಟು ಕೆಂಪು ಬಣ್ಣ ಕಪ್ಪು ಗೆರೆಯ ಬಾಲ ಮತ್ತು ಬೂದುಮಿಶ್ರಿತ ಕಪ್ಪು ಬಣ್ಣದ ಕೊಕ್ಕು ಮತ್ತು ಕಾಲು ಇದರ ಗುಣ ಲಕ್ಷಣಗಳು.

ಸಂತಾನಭಿವೃದ್ದಿ ಸಾಮಾನ್ಯವಾಗಿ ದಿಸೆಂಬರ್ ನಿಂದ ಮೇ ತಿಂಗಳಾವಧಿಯಲ್ಲಿ ಎರಡರಿಂದ ನಾಲ್ಕು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ. ಸಾಮಾನ್ಯವಾಗಿ ನೀರಿನಂಚಿನಲ್ಲಿರುವ ಸಣ್ಣಕಲ್ಲುಗಳ ಗುಡ್ಡೆ ಸಂದುಗಳಲ್ಲಿ ಕಲ್ಲಿನಂತೆಯೇಕಾಣುವ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ.

ಚಿಟವಕ್ಕಿ ದಕ್ಷಿಣ ಭಾರತದಲ್ಲಿ, ಉತ್ತರಕರ್ನಾಟಕ, ಕೇರಳಾ ಮತ್ತು ಕಣ್ಣೂರು ಪ್ರದೇಶಗಳಲ್ಲಿ ಜಾಸ್ತಿಯಾಗಿ ನೋಡಲುಸಿಗಬಹುದು.









Monday, March 9, 2009

ಕಪಟ ಮೊಸಳೆಯು, ಅದರ ಮೋಸದ ಬುದ್ದಿಯು - ನೀತಿ ಕಥೆ

ಏನಿದು ಪರಿಸರ - ಪ್ರಾಣಿ ಪ್ರೇಮಿಯ ಬ್ಲಾಗ್ ನಲ್ಲಿ ನೀತಿಕಥೆ ಎಂದು ವಿಚಿತ್ರವೆಸಿಸುತ್ತಿದೆಯಾ?!

ನಮ್ಮ ಬಾಲ್ಯದಲ್ಲಿ ಇಂಥ ಎಷ್ಟೋಂದು ನೀತಿ ಕಥೆಗಳು ನಮಗೆ ಕೇಳಲು, ಓದಲು ಲಭ್ಯವಿತ್ತು. ಇಂಥ ಕಥೆಗಳಿಂದ ಒಂದಷ್ಟು ನೀತಿಗಳು ಕನಿಷ್ಟ ಪ್ರಭಾವ ನಮ್ಮ ಮೇಲೆ ಇಂದು ಬೀರಿದೆ ಎಂದು ಭಾವಿಸುತ್ತೇನೆ. (ಕನಿಷ್ಟ, ಕೆಲವರಲ್ಲಾದರೂ...!) ಜೊತೆಗೆ ಕಥೆ ಹೇಳಿದ ಅಜ್ಜ, ಅಜ್ಜಿ, ಅಮ್ಮ, ಅಪ್ಪ, ಮೇಷ್ಟ್ರು ಅಥವಾ ಇನ್ಯರೋ ನಮ್ಮ ಪಾಲಿಗೆ ಬೇರೆಯದೇ ರೀತಿಯಲ್ಲಿ ಬಿಂಬಿತವಾಗಿದ್ದಾರೆ ಹಾಗೇ ಕಥೆಗಳ ನೆಪದಲ್ಲಿ ಇವರುಗಳು ಎಲ್ಲೆಲ್ಲೋ ನೆನಪಾಗುತ್ತಾರೆ. ಈ ನೀತಿಕಥೆಗಳ ಲಾಭ ಇಲ್ಲಿಗೇ ನಿಲ್ಲುವುದಿಲ್ಲ. ಈ ಕಥೆಗಳಲ್ಲಿ ಕಾಡು, ಗಿಡ, ಮರ, ಹೂವುಗಳು, ಚಿಟ್ಟೆಗಳು, ಪ್ರಾಣಿಗಳು ಮತ್ತು ಪಕ್ಷಿಗಳೂ ಬಂದು ತಮ್ಮ ಪಾತ್ರ ನಿರ್ವಹಿಸುತ್ತವೆ. ಇದರಿಂದಾಗಿ ನಮಗೆ ಇಂದಿಗೂ ನಮ್ಮ ಬಾಲ್ಯ ನೆನೆದರೆ ಕಣ್ಣಲ್ಲಿ ಒಂದು ಮಿಂಚು ಮೂಡುತ್ತದೆ, ನೆನಪಿನ ಬುತ್ತಿ ಬೆಳದಿಂಗಳಾಗುತ್ತದೆ. ಇದರೊಂದಿಗೆ ನಮಗೆ ಒಂದಷ್ಟು ಗಿಡಗಳ, ಮರಗಳ, ಹಣ್ಣಿನ, ಪ್ರಾಣಿಗಳ ಮತ್ತು ಪಕ್ಷಿಗಳ ಹೆಸರು ಗೊತ್ತು. ಅವುಗಳೊಂದಿಗೆ ನಮ್ಮ ಬಾಲ್ಯ ಬೆಸೆದುಕೊಂಡಿದೆ. ಇಂದಿನ ಮಕ್ಕಳಿಗೆ ಇದೆಲ್ಲಾ ಇಂಟರ್ ನೆಟ್ಟಲ್ಲಿ ಡೌನ್ ಲೋಡ್ ಗೆ ಸಿಗುವ ಸಾಪ್ಟ್ ಕಾಪಿಗಳು. ವಿಡಿಯೋ ಗೇಮುಗಳು, ಕಾರ್ಟೂನು ನೆಟ್ವರ್ಕು, ನ್ಯಾಷನಲ್ ಜಿಯಾಗ್ರಫಿ ಚಾನೆಲ್ಲಿನಲ್ಲಿ ಹಾಗೂ ಇಂಗ್ಲಿಷ್ ಸಿನೆಮಾನಲ್ಲಿ ತೋರಿಸುವ ಯಾವುದೋ ಗ್ರಹದ ಜೀವಿಗಳು. ನೋಡಿರುವ ಪ್ರಾಣಿ ಪಕ್ಷಿಗಳೆಂದರೆ ಕಾಗೆ ಮತ್ತು ನಾಯಿ!! ಹತ್ತು ಮಕ್ಕಳನ್ನು ನೀವೇ ಮಾತನಾಡಿಸಿ ನೋಡಿ... ಕುತೂಹಲಕ್ಕೆ!

ಬಾಲ್ಯದಲ್ಲಿ ನಾವು ಕೇಳಿದ ನೀತಿ ಕಥೆಗಳನ್ನು ಈಗ ಮತ್ತೊಮ್ಮೆ ನಾವು ನೆನಪಿಸಿಕೊಂಡರೆ, ನಮ್ಮ ಮಕ್ಕಳಿಗೆ ಒಂದಷ್ಟು ಕಥೆ ಹೇಳಲು ಸರಕಿರುತ್ತದೆ ಮತ್ತು ನಮ್ಮನ್ನು ಬಾಲ್ಯಕ್ಕೊಯ್ಯುತ್ತದೆ... ನಾವೇ ತಪ್ಪು ಹೆಜ್ಜೆ ಇಟ್ಟಾಗ ಚಾಟಿಯಾಗುತ್ತದೆ... ಸರಿದಾರಿ ತೋರುವ ಗುರುವಾಗುತ್ತದೆ...

ಈ ನೀತಿಕಥೆಗಳಿಗೆ ಅಂಥಾ ಶಕ್ತಿ ಖಂಡಿತಾ ಇದೆ ಎಂದು ನಂಬಿದ್ದೇನೆ.

ಹೀಗೆ ಆಗಾಗ ಮಧ್ಯೆ ಒಂದೊಂದು ಹಳೆಯ, ಪರಿಸರ, ಪಕ್ಷಿ ಮತ್ತು ಪ್ರಾಣಿಗಳ ಪಾತ್ರ ಹೊಂದಿರುವ ನೀತಿಕಥೆಗಳನ್ನು ಪ್ರಕಟಿಸುತ್ತೇನೆ...

ಕೋತಿ ಮತ್ತು ಮೊಸಳೆ
ಒಂದಾನೊಂದು ಕಾಲದಲ್ಲಿ, ಹಚ್ಚ ಹಸುರಾದ ಕಾಡಿನಲ್ಲಿ ಒಂದು ನೇರಳೆಯ ಮರವಿತ್ತು. ಹಣ್ಣುಗಳಿಂದ ತುಂಬಿದ ಅದನ್ನು ಕೋತಿಯೊಂದು ತನ್ನ ಮನೆಯನ್ನಾಗಿ ಮಾಡಿಕೊಂಡಿತ್ತು. ಆ ಕೋತಿಯು ತುಂಬಾ ಬುದ್ದಿವಂತ ಹಾಗೂ ಸಾಧು ಸ್ವಭಾವದ ಕೋತಿ. ಅದರ ವರ್ತನೆಯು ಎಲ್ಲಾ ಪ್ರಾಣಿಗಳಿಗೂ ಇಷ್ಟವಾಗುತಿತ್ತು. ಆ ಮರದ ಬಳಿಯೇ ಒಂದು ನದಿ ಹರಿಯುತ್ತಿತ್ತು. ಆ ಹೊಳೆಯಲ್ಲಿ ಮಕರವೆಂಬ ಮೊಸಳೆಯು ವಾಸ ಮಾಡುತ್ತಿತ್ತು.

ಒಂದು ದಿನ ಆ ಮರದ ಹತ್ತಿರ ಬಂದ ಮೊಸಳೆಯು ಮೇಲೆ ಕುಳಿತಿದ್ದ ಕೋತಿಯನ್ನು ನೋಡಿ "ಓ ಮಂಗಣ್ಣನೇ ನಿನ್ನ ಹೆಸರೇನು?" ಎಂದಿತು. "ನನ್ನ ಹೆಸರು ಹನುಮ ಎನ್ನುತ್ತಾರೆ, ನಿನ್ನ ಹೆಸರೇನು ಹೇಳು" ಎಂದಿತು. ಆಗ ಮೊಸಳೆಯು "ನನ್ನ ಹೆಸರು ಮಕರ, ನಾನು ಈ ನದಿಯ ಆ ದಡದಲ್ಲಿ ವಾಸಿಸುತ್ತೇನೆ. ನನ್ನ ಆಹಾರಕ್ಕಾಗಿ ಇಲ್ಲಿಗೆ ಬಂದಿರುವೆ" ಎಂದಿತು. ಆಗ ಹನುಮನು "ನೀನು ಆಹಾರವನ್ನು ಹುಡುಕಿಕೊಂಡು ಬಂದಿರುವೆಯಾ? ದೇವರ ದಯದಿಂದ ಇಲ್ಲಿ ನನಗೆ ಆಹಾರದ ಕೊರತೆ ಇಲ್ಲ. ಬೇಕಾದಷ್ಟು ಹಣ್ಣುಗಳು ಇವೆ. ಈ ರುಚಿ ರುಚಿಯಾಗಿರುವ ಹಣ್ಣನ್ನು ನೀನೂ ತಿನ್ನಲು ಇಚ್ಚಿಸುವೆಯಾ? ಬೇಕಾದಲ್ಲಿ ತುಂಬಾ ಕಿತ್ತುಕೊಡುವೆ ಎಂದು ಹೇಳಿತು. ಉತ್ತರವಾಗಿ ಮೊಸಳೆಯು ಅದರ ರುಚಿಯ ಬಗ್ಗೆ ತಾನೂ ಕೇಳಿರುವುದಾಗಿ ಹೇಳಿತು. ಕೋತಿಯು ಸ್ವಲ್ಪ ಹಣ್ಣುಗಳನ್ನು ಕಿತ್ತು ಮೊಸಳೆಯ ಕಡೆಗೆ ಎಸೆಯಿತು. ಅವುಗಳನ್ನು ಸವಿದ ಮೊಸಳೆಯು "ಆಹಾ! ನಾನು ಇದುವರೆಗೆ ತಿಂದ ಹಣ್ಣುಗಳಲ್ಲಿ ಇದೇ ಬಹಳ ರುಚಿ!" ಎಂದಿತು. ಸಂತಸಗೊಂಡ ಹನುಮನು ಮತ್ತಷ್ಟು ಹಣ್ಣುಗಳನ್ನು ಮೊಸಳೆಗೆ ನೀಡಿತು. ಅದನ್ನು ತಿಂದ ಮೊಸಳೆಯು ತಾನು ಪುನಃ ಬಂದು ಈ ಹಣ್ಣುಗಳ ರುಚಿ ನೋಡಬಹುದೇ ಎಂದಿತು. ಕೋತಿಯು "ಖಂಡಿತವಾಗಿ, ಯಾವಾಗ ಬಂದರೂ ನಿನಗೆ ಬೇಕಾದಷ್ಟು ಹಣ್ಣು ಸಿಗುವುದು ಬಾ!" ಎಂದಿತು. ಮೊಸಳೆಯು ಆನಂದದಿಂದ ತನ್ನ ಮನೆಗೆ ಹಿಂತಿರುಗಿತು.

ಆ ದಿನದಿಂದ ಅವೆರಡೂ ಉತ್ತಮ ಸ್ನೇಹಿತರಾದವು. ಪ್ರತಿ ದಿನವೂ ಮೊಸಳೆಯು ಮರದ ಬಳಿ ಬಂದು ಹಣ್ಣನ್ನು ತಿಂದು ಕೋತಿಯ ಜೊತೆ ಕಾಲ ಕಳೆದು ಹೋಗುತ್ತಿತ್ತು.

ಒಂದು ದಿನ ಕೋತಿಯು ಸ್ನೇಹಿತನನ್ನು ಅದರ ಸಂಸಾರದ ಬಗ್ಗೆ ವಿಚಾರಿಸಿತು. ಆಗ ಮೊಸಳೆಯು ತನ್ನ ಹೆಂಡತಿಯೊಬ್ಬಳನ್ನೇ ಮನೆಯಲ್ಲಿ ಬಿಟ್ಟಿರುವುದಾಗಿ ತಿಳಿಸಿತು. ಆಗ ಕೋತಿಯು "ನಿನ್ನ ಹೆಂಡತಿಗೇಕೆ ಹಣ್ಣನ್ನು ತೆಗೆದುಕೊಂಡು ಹೋಗಬಾರದು" ಎನ್ನಲು ಮೊಸಳೆಯು ಒಪ್ಪಿ ಸ್ವಲ್ಪ ಹಣ್ಣನ್ನು ಹೆಂಡತಿಗೂ ಒಯ್ದಿತು. ಈ ಹಣ್ಣುಗಳ ರುಚಿ ಮೊಸಳೆಯ ಹೆಂಡತಿಯು ಚಪ್ಪರಿಸುತ್ತಾ, ಈ ಹಣ್ಣು ನಿನಗೆ ಎಲ್ಲಿ ಸಿಕ್ಕಿತು ಎಂದು ಪ್ರಶ್ನಿಸಲು, ಮೊಸಳೆಯು ತನ್ನ ಸ್ನೇಹಿತನಾದ ಹನುಮನು ದಿನಾಗಲೂ ಇದನ್ನೇ ಸೇವಿಸುವುದಾಗಿ ತಿಳಿಸಿ ತನಗೂ ಕೊಡುತ್ತದೆ ಎಂದು ಹೇಳಿತು.

ಸ್ವಲ್ಪ ಅತ್ಯಾಸೆಯ ಸ್ವಭಾವದ ಆ ಹೆಣ್ಣು ಮೊಸಳೆಯು ದಿನಾಗಲೂ ಹಣ್ಣನ್ನು ತಿಂದು ಆ ಕೋತಿಯ ಮಾಂಸ ಬಹಳ ರುಚಿಯಾಗಿರಬೇಕೆಂದು ಮನಸ್ಸಿನಲ್ಲೇ ಲೆಕ್ಕ ಹಾಕಿತು. ಒಂದು ದಿನ ಎಂದಿನಂತೆ ಮನೆಗೆ ಬಂದ ಮೊಸಳೆಗೆ ತನ್ನ ಹೆಂಡತಿಯು ನರಳುತ್ತಾ ಒಂದು ಮೂಲೆಯಲ್ಲಿ ಮಲಗಿರುವುದು ಕಂಡಿತು. ಆಗ ವಿಚಾರಿಸಲು ಹೆಂಡತಿಯು "ನನಗೆ ಅಸಾಧ್ಯವಾದ ತಲೆನೋವು ಬಂದಿದೆ. ವ್ಯೆದ್ಯರ ಬಳಿ ಹೋಗಿದ್ದೆ. ಕೋತಿಯ ಹೃದಯವನ್ನು ತಿಂದರೆ ಈ ನೋವು ವಾಸಿ ಆಗುವುದಂತೆ. ಇಲ್ಲದಿದ್ದರೆ ಬದುಕುವುದಿಲ್ಲ ಎಂದು ಹೇಳಿದ್ದಾರೆ. ನನ್ನನ್ನು ಸಾಯಲು ಬಿಡುತ್ತೀಯಾ ಎಂದು ಹೇಳಿ ಮತ್ತೆ "ಕೋತಿಗಳು ನಮ್ಮ ಸ್ನೇಹಿತರಾಗಲು ಸಾಧ್ಯವೇ? ಅವು ಹಿಂದಿನಿಂದಲೂ ನಮ್ಮ ಆಹಾರವಲ್ಲವೆ?" ಎಂದು ಪ್ರಶ್ನಿಸಿತು.

ಆಗ ಮಕರವು ಛೇ! ಖಂಡಿತಾ ಇದು ನನ್ನಿಂದ ಸಾಧ್ಯವಿಲ್ಲ. ಅದೂ ಅಲ್ಲದೆ ಈ ಕಾರಣಕ್ಕೆ ಯಾರು ಬರುತ್ತಾರೆಂದು ಹೇಳಿ ಒಪ್ಪಲಿಲ್ಲ. ಇಷ್ಟಕ್ಕೇ ಬಿಡದ ಅದರ ಹೆಂಡತಿಯು ತಮ್ಮ ಮನೆಯಲ್ಲಿ ಭೋಜನದ ನೆವದಲ್ಲಿ ಕರೆಯಬೇಕೆಂದು ಸೂಚಿಸಿತು. ಇದಕ್ಕೆ ಒಪ್ಪಿದ ಮಕರವು ತನ್ನ ಸ್ನೇಹಿತ ಹನುಮನ ಬಳಿಗೆ ಹೋಗಿ ತನ್ನ ಹೆಂಡತಿಯು ಅದನ್ನು ಆಹ್ವಾನಿಸಿರುವುದನ್ನು ತಿಳಿಸಿತು. ಆಗ ಕೋತಿಯು "ನಾನು ಈಜು ಕಲಿತಿಲ್ಲ. ನಿಮ್ಮ ಮನೆಗೆ ಹೇಗೆ ಬರಲಿ" ಎಂದು ತಿಳಿಸಿತು. ಆಗ ಮೊಸಳೆಯು ಅದನ್ನು ತನ್ನ ಮೇಲೆ ಕೋರಿಸಿಕೊಂಡು ಕರೆದುಕೊಂಡು ಹೋಗುವುದಾಗಿ ತಿಳಿಸಿತು. ಕೋತಿಯು ಸ್ನೇಹಿತನ ಹೆಂಡತಿಯ ಆಸೆಯನ್ನು ಪೂರೈಸಲು ಮೊಸಳೆಯ ಬೆನ್ನ ಮೇಲೆ ಕುಳಿತು ಹೊರಟಿತು.

ಹೊಳೆಯ ಮಧ್ಯಭಾಗಕ್ಕೆ ಬಂದಾಗ ಮೊಸಳೆಯು ಏಕೋ ಮಂಕಾಗಿರುವುದನ್ನು ಗಮನಿಸಿದ ಕೋತಿಯು ಮೊಸಳೆಯನ್ನು ಏಕೆಂದು ಕೇಳಿತು. ಆಗ ಮೊಸಳೆಯು "ನನ್ನ ಹೆಂಡತಿ ಮೈಸರಿಯಿಲ್ಲ. ಅದಕ್ಕೋಸ್ಕರ ಅವಳು ನಿನ್ನ ಹೃದಯವನ್ನು ತಿನ್ನಬೇಕಂತೆ. ಇಲ್ಲದಿದ್ದಲ್ಲಿ ಅವಳು ಬದುಕುವುದಿಲ್ಲ" ಎಂದಿತು.

ತಕ್ಷಣವೇ ಅಪಾಯವನ್ನು ತಿಳಿದುಕೊಂಡ ಜಾಣ ಕೋತಿಯು "ಈಗ ತಾನು ಮೊಸಳೆಯ ಮನೆಗೆ ಹೋದಲ್ಲಿ ತನ್ನ ಜೀವವು ಹೋದಂತೆಯೇ" ಎಂದು ಯೋಚಿಸಿತು. ಉಪಾಯದಿಂದಲೇ ತಪ್ಪಿಸಿಕೊಳ್ಳಬೇಕೆಂದು ಅದು ನಿರ್ಧರಿಸಿತು. "ಅಯ್ಯೋ ಮಿತ್ರನೇ, ಇದನ್ನು ಹೇಳಲು ಇಷ್ಟು ಹಿಂಜರಿಕೆಯೇ? ಇದನ್ನು ಮೊದಲೇ ಹೇಳಬಾರದಿತ್ತೇ? ನನಗೇನು ಗೊತ್ತು! ನಾನು ನನ್ನ ಹೃದಯವನ್ನು ಅಲ್ಲೇ ಮರದ ಕೊಂಬೆಗೆ ನೇತು ಹಾಕಿದ್ದೆ. ಹೇಳಿದ್ದರೆ ಜೊತೆಯಲ್ಲೇ ತಂದುಬಿಡುತ್ತಿದ್ದೆ. ಈಗ ಮತ್ತೇ ಅಷ್ಟು ದೂರ ನೀನು ಈಜುವಂತೆ ಆಯಿತಲ್ಲ" ಎಂದು ವಿಷಾದವನ್ನು ಅಭಿನಯಿಸಿತು.

ಇದನ್ನು ನಂಬಿದ ಮೊಸಳೆಯು ಮತ್ತೆ ಮರದ ಹಿಂತಿರುಗಿತು. ದಡ ಸಿಕ್ಕಿದ ಕೂಡಲೇ ಹನುಮನು ಮರಕ್ಕೆ ನೆಗೆದು "ಅಯ್ಯೋ ಮೂರ್ಖ ಮೋಸಳೆಯೇ, ಎಲ್ಲಾದರೂ ಹೃದಯವನ್ನು ದೇಹದಿಂದ ತೆಗೆದಿಡಲು ಆಗುತ್ತದೆಯೇ? ಮೋಸಕ್ಕೆ ತಕ್ಕ ಉಪಾಯ ಹೂಡಿದೆ ಅಷ್ಟೆ. ನನ್ನ ನಿನ್ನ ಸ್ನೇಹ ಇಂದಿಗೇ ಮುಗಿಯಿತು, ಮತ್ತೆ ಮುಖ ತೋರಿಸಬೇಡ" ಎಂದು ಹೇಳಿ ಎಂದಿನಂತೆ ತಾನು ಮರದಲ್ಲಿ ಹಣ್ಣುಗಳನ್ನು ಸವಿಯುತ್ತಾ ಸುಖವಾಗಿತ್ತು, ಮೂರ್ಖ ಮೊಸಳೆಯು ತನ್ನ ದಡ್ಡತನದಿಂದ ಒಳ್ಳೆಯ ಸ್ನೇಹವನ್ನು ಕಳೆದುಕೊಂಡಿತು.

- ನೀತಿ: ಒಳ್ಳೆಯ ಸ್ನೇಹವನ್ನು ಮಾಡಬೇಕು.
- ನೀತಿ: ಮಿತ್ರ ದ್ರೋಹ ಮಾಡಬಾರದು
- ನೀತಿ: ಅಪಾಯ ಬಂದಾಗ ಉಪಾಯಮಾಡು.
- ನೀತಿ: ಅತಿ ಆಸೆ ಗತಿ ಕೇಡು.