About Me

Tuesday, September 7, 2010

ಹಳದಿ ಕೊರಳಿನ ಪಿಕಳಾರ - Yellow Throated Bulbul


ಹಳದಿ ಕೊರಳಿನ ಪಿಕಳಾರ (Yellow Throated Bulbul) ಪಿಕಳಾರ ಪ್ರಭೇದಕ್ಕೆ ಸೇರಿದ ಪಕ್ಷಿಗಳಲ್ಲಿ ಒಂದು. ಈ ಹಕ್ಕಿಯು ಹೆಚ್ಚಾಗಿ ಕಲ್ಲು ಬಂಡೆಗಳಿಂದ ಕೂಡಿದ ಬೆಟ್ಟಗಳಲ್ಲಿ ಕಂಡು ಬರುತ್ತದೆ. ತುಂಬಾ ನಾಚಿಕೆ ಸ್ವಭಾವದ ಈ ಹಕ್ಕಿಯನ್ನು ನೋಡಲು ಸ್ವಲ್ಪ ತಾಳ್ಮೆ, ಪ್ರೀತಿ ಮತ್ತು ಸೂಕ್ಷ್ಮ ದೃಷ್ಟಿ ಬೇಕಾಗುತ್ತದೆ. ಮೊದಲೇ ನಾಚಿಕೆಯ ಹಕ್ಕಿಯಾದ ಹಳದಿ ಕೊರಳಿನ ಪಿಕಳಾರ ಗಿಡಗಳ, ಸಣ್ಣ ಮರಗಳ ಸಂದುಗಳಲ್ಲಿ, ಎಲೆ ಕಡ್ಡಿಮರೆಯಲ್ಲಿಯೇ ಬಹುತೇಕ ಸಮಯವನ್ನು ಕಳೆಯುತ್ತದೆ. ಬಲು ಚಟುವಟಿಕೆಯ ಹಕ್ಕಿಯಾದ ಇದು ಕೆಮೆರಾ ಕಣ್ಣಿಗೆ ದಾಖಲೆಯಾಗುವುದು ಕಷ್ಟದ ಕೆಲಸ! ಇಡೀ ದಿನದ ನನ್ನ ಶ್ರಮಕ್ಕೆ, ಸಂಜೆ ಹಿಂತಿರುಗುವ ಹೊತ್ತಿಗೆ ಸಿಕ್ಕಿದ್ದು ಕೇವಲ ೪ ಸಾಧಾರಣ ಚಿತ್ರಗಳು!

ಕೂತಲ್ಲಿ ಕೂರದೇ ಕಡ್ಡಿಯಿಂದ ಕಡ್ಡಿಗೆ ಮರದಿಂದ ಮರಕ್ಕೆ ಹಾರುತ್ತಿರುತ್ತದೆ. ಯಾವುದೋ ಪೊದೆಯ ಸಂದುಗಳಿಂದ ಇದರ ಮಧುರ ಗಾನ ಕೇಳುತ್ತಿರುತ್ತದೆ. ನೀವು ಈ ಪಿಕಳಾರವನ್ನು ಗುರುತಿಸುವ ಹೊತ್ತಿಗೆ, ಇನ್ಯಾವುದೋ ಮರದಲ್ಲಿ ಕೂತಿರುತ್ತದೆ!

ದಕ್ಷಿಣ ಭಾರತದ ಕೆಲವು ಪ್ರದೇಶಗಳಲ್ಲಿ ಈ ಹಕ್ಕಿಯನ್ನು ಕಾಣಬಹುದು. IUCN (International Union for Conservation Nature) ಈ ಹಕ್ಕಿಯನ್ನು ವಿನಾಶದ ಹಾದಿಯಲ್ಲಿರುವ ಹಕ್ಕಿಗಳ ಪಟ್ಟಿಗೆ ಸೇರಿಸಿದೆ. ನಮ್ಮ ಮನೆಯ ಗ್ರಾನೇಟ್, ತಳಪಾಯಕ್ಕೆ ಬಳಸಿರುವ ಕಲ್ಲು, ಜಲ್ಲಿ ಕಲ್ಲು ಈಗೆ ಹಲವು ನಮ್ಮ ಬದುಕಿನ ಐಶಾರಾಮಿ ಅನುಕೂಲಗಳಿಗೆ ಮತ್ತು ನಮ್ಮ ಪ್ರಗತಿಯ ದಾಳಿಗೆ, ನಮ್ಮ ಒಂದಲ್ಲಾ ಒಂದು ನಿತ್ಯ ದಾಹಕ್ಕೆ ಕರಗಿದ ಎಷ್ಟೋ ಕಲ್ಲು ಬಂಡೆ ಗುಡ್ಡಗಳು! ಅದರ ಜೊತೆಗೆ; ಹಳದಿ ಕೊರಳಿನ ಪಿಕಳಾರ ಸೇರಿದಂತೆ ಇನ್ನೂ ಎಷ್ಟೋ ಜೀವರಾಶಿಯ ಬದುಕನ್ನು ಕರಗಿಸಿದೆ.

ಈ ಹಕ್ಕಿಯು ಜೀವಿಸಿವ ತಾಣಗಳ ನಾಶದಿಂದ ಸಂತತಿ ಕ್ಷೀಣಿಸಿದೆ. ಕಲ್ಲು ಗಣಿಗಾರಿಕೆ, ಕಾಡಿನ ಬೆಂಕಿ, ವ್ಯವಸಾಯಕ್ಕೆ ಕಾಡು ಒತ್ತುವರಿ (Granite Quarrying, Forest Fires and Grazing) ಮತ್ತು ಇತರೆ ಕಾರಣಗಳು ಪ್ರಮುಖ ಪಾತ್ರ ವಹಿಸಿವೆ.

ಇದರ ವಾಸ ಯೋಗ್ಯ ತಾಣಗಳ ರಕ್ಶಣೆ, ಮರು ನಿರ್ಮಾಣದಿಂದ ಇದರ ಸಂತತಿ ಹೆಚ್ಚಿಸುವ ಸಾದ್ಯತೆ ಇದೆ.

ಹಳದಿ ಕೊರಳಿನ ಪಿಕಳಾರದ ಜೀವನ ಪದ್ದತಿ:

ತಲೆ, ಕೊರಳು ಮತ್ತು ಕುಂಡೆ ಹಳದಿ ಬಣ್ಣದಿಂದ ಕೂಡಿದ್ದು, ಕೊರಳು ಹೆಚ್ಚಿನ ಹಳದಿ ಹೊಂದಿರುತ್ತದೆ. ಉಳಿದ ಮೈ ಬಣ್ಣ ಬೂದು ಬಣ್ಣದ್ದಾಗಿರುತ್ತದೆ. ಸಣ್ಣ ಹುಳುಗಳು, ಕೀಟಗಳು ಹಾಗು ಕಾಡಿನಲ್ಲಿ ಬೆಳೆವ ಹಲವು ಬಗೆಯ ಗಿಡ, ಮರಗಳ ಹಣ್ಣುಗಳು, ಕಾಯಿಗಳು ಇದರ ಆಹಾರ.

ಜೂನ್ ನಿಂದ ಆಗಸ್ಟ್ ತಿಂಗಳಲ್ಲಿ ಎರಡು ಮೊಟ್ಟೆಯನ್ನಿಟ್ಟು ೨೦ ದಿನಗಳ ಕಾಲ ಕಾವು ಕೊಟ್ಟು, ೧೩ ದಿನಗಳ ನಂತರ ಮೊಟ್ಟೆಯೊಡೆದು ಮರಿಗಳಾಗುತ್ತವೆ. ಸಣ್ಣ ಮರಗಳ ರೆಂಬೆಗಳಲ್ಲಿ ಇವು ಸಾಮಾನ್ಯವಾಗಿ ಗೂಡು ಮಾಡುತ್ತದೆ.

ಮಾಹಿತಿ: ವಿಕಿಪೀಡಿಯಾ

- ಗೌರೀಶ ಕಪನಿ

4 comments: